ಹೋಗಿ ಬನ್ನಿ, ಡಾ. ಆನಂದ ಪಾಂಡುರಂಗಿ ಸರ್…🙏

ಪ್ರತಿ ಬಾರಿ ಧಾರವಾಡ ದಾಟಿ ಹೋಗುವಾಗಲೆಲ್ಲ, ಇವರನ್ನೊಮ್ಮೆ ಕಂಡು ಮಾತನಾಡಿಸಿ ಹೋಗಬೇಕು ಎಂದು ಮನಸ್ಸಾಗುತ್ತಿತ್ತು. 1996ರಿಂದ 2026 ಇಂದಿನ ಈ ಕ್ಷಣದ ವರೆಗೂ ನನಗೆ ತೀವ್ರ ಖಿನ್ನತೆ ಕಾಡಿದಾಗ ಮನಸು ಅನ್ಯ ಮನಸ್ಕತೆಗೆ ಜಾರಿದಾಗಲೆಲ್ಲ ನೆನಪಾಗುತ್ತಿದ್ದವರಲ್ಲಿ ಇವರು ಮೊದಲಿಗರು.
ಉಹುಂ…ಆದರೆ ಆ ಭೇಟಿ ಸಾಧ್ಯವಾಗಲೇ ಇಲ್ಲ. ಈಗ ಅವರೇ ಈ ಲೋಕದ ಉಸಾಬರಿ ಸಾಕೆಂದು ಎದ್ದು ಹೊರಟು ನಿಂತಿದ್ದಾರೆ.
ಒಂದು ಕಾಲಕ್ಕೆ ಅವರು ನನ್ನ ಪಾಲಿಗೆ ಕೇವಲ ನೋವಿನ ವೈದ್ಯರಾಗಿರಲಿಲ್ಲ. ದೇವರೂ ಆಗಿರಲಿಲ್ಲ. ಆದರೆ ಒಂದು ಭರವಸೆಯಾಗಿದ್ದರು. ಒಂದು ಸಾಂತ್ವನವಾಗಿದ್ದರು.
ಧಾರವಾಡದ ಪಿಯುಸಿ ದಿನಗಳು ನನ್ನ ಬದುಕಿನ ಅತ್ಯಂತ ಪ್ರಕ್ಷುಬ್ಧ ದಿನಗಳು. ಹೊಸ ಊರು, ಹೊಸ ಕಾಲೇಜು, ಹೊಸ ಸಂಸ್ಕೃತಿಯ ಆಘಾತ. ಹೀಗೆ ….! ಆಗ ನನಗೆ ಎರಡು ದಾರಿಗಳಷ್ಟೇ ಕಾಣುತ್ತಿದ್ದವು — ಧಾರವಾಡ ಬಿಟ್ಟು ಊರಿಗೆ ಹೋಗುವುದು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದು.
ಸಪ್ತಾಪುರದ ಮಿಚಿಗನ್ ಕಂಪೌಂಡ್‌ನ ನನ್ನ ಪುಟ್ಟ ಸಿಂಗಲ್ ರೂಮಿನಿಂದ ಅವರ ಮನೆ-ಆಸ್ಪತ್ರೆ ಕೂಗಳತೆಯ ದೂರದಲ್ಲೇ ಇತ್ತು. ನನ್ನ ತಲ್ಲಣಗಳಿಗೆ ಏನು ಹೆರಿಡಬೇಕೆಂದು ನನಗೇ ಗೊತ್ತಿರರಿಲಿಲ್ಲ. ಅದು ತೀವ್ರ ಖಿನ್ನತೆ ಮತ್ತು ಆತಂಕದ ಕಾಯಿಲೆ ಎಂಬ ಅರಿವೂ ಇರದ ಶುದ್ಧ ಅಬ್ಬೇಪಾರಿ ದಿನಗಳು.
ಒಬ್ಬ ಗೆಳೆಯ ನನ್ನನ್ನು ಮೊದಲ ಬಾರಿ ಅವರ ಬಳಿಗೆ ಕರೆದುಕೊಂಡು ಹೋದ. ನಂತರ ಎರಡು ಬಾರಿ ನಾನೇ ಹೋದೆ. ಕಾಯಿಲೆ ನಿಧಾನವಾಗಿ ವಾಸಿಯಾಯಿತು. ಬದುಕು ಬೆಂಗಳೂರಿಗೆ ತಂದು ಎಸೆದಿತು. ಬಿರುಗಾಳಿ ಸ್ತಬ್ಧವಾಯಿತು.
ಉಹುಂ… ಅವರು ಎಲ್ಲ ವೈದ್ಯರ ಹಾಗಿರಲಿಲ್ಲ.
ಮನಸ್ಸು ಮಾಡಿದ್ದರೆ ನ್ಯೂರೋ, ಓಬಿಜಿ, ರೇಡಿಯಾಲಜಿ ಎಂಬ ದುಡ್ಡು ಮಾಡುವ ಕಸುಬಿಗೆ ಇಳಿಯಬಹುದಿತ್ತು. ಆದರೆ ಅವರು ಆಯ್ದುಕೊಂಡದ್ದು ಅಂತಹ ‘ಆಮದನಿ’ಯಿಲ್ಲದ ಮನೋವೈದ್ಯಕೀಯ ಶಾಸ್ತ್ರ. ನಿಜ ಹೇಳಬೇಕೆಂದರೆ, ಅವರು ಮನೋವೈದ್ಯಕೀಯವನ್ನು ಆಯ್ಕೆ ಮಾಡಲಿಲ್ಲ; ಮನೋವೈದ್ಯಕೀಯವೇ ಅವರನ್ನು ಆಯ್ಕೆ ಮಾಡಿಕೊಂಡಂತೆ ಬದುಕಿದರು.
ಸಪ್ತಾಪುರದ ಮಿಚಿಗನ್ ಕಂಪೌಂಡ್‌ನ ಅವರ ಮನೆ ಮತ್ತು ಆಸ್ಪತ್ರೆಯನ್ನು ಬೇರ್ಪಡಿಸಲು ಸಾಧ್ಯವಿರಲಿಲ್ಲ. ಅದು ಚಿಕಿತ್ಸಾಲಯಕ್ಕಿಂತ ಹೆಚ್ಚಾಗಿ ಸಾಂತ್ವನದ ಮನೆಯಾಗಿತ್ತು. ನನ್ನಂತಹ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆತಂಕಿತ ಮನಸ್ಸುಗಳಿಗೆ ಅವರು ಆಸರೆಯಾಗಿದ್ದರು.
ಎಪ್ಪತ್ತನಾಲ್ಕು ಸಾಯುವ ವಯಸ್ಸಲ್ಲ. ತೀರ ನಿನ್ನೆ-ಮೊನ್ನೆಯವರೆಗೆ ವಿಜಯವಾಣಿಯಲ್ಲಿ ಅವರ ಅಂಕಣ ಓದಿದ ನೆನಪು. ಯೂಟ್ಯೂಬ್‌ನಲ್ಲಿ ಅವರ ಪ್ರೇರಣಾದಾಯಕ ಮಾತು ಕೇಳಿದ ನೆನಪು ಇನ್ನೂ ತಾಜಾ.
“ಡಾಕ್ಟರ್ ಆದರೆ ಇವರ ಹಾಗೆ ಆಗಬೇಕು” ಎಂದು ಕೈಬೆರಳು ಮಾಡಿ ತೋರಿಸಬಹುದಾದ ಆದರ್ಶವನ್ನು ಅವರು ಬದುಕಿ ತೋರಿಸಿದರು.
ಅರ್ಥದ ಬೆನ್ನು ಹತ್ತಿ ಮನಸ್ಸನ್ನೂ ಹೃದಯವನ್ನೂ ಮೊಂಡಾಗಿಸಿಟ್ಟುಕೊಂಡಿರುವ ಈ ಲೋಕದಲ್ಲಿ, ಇಂತಹ ವೈದ್ಯರು ಮತ್ತೆ ಸಿಗುವುದು ಕಷ್ಟ.
ಹೋಗಿ ಬನ್ನಿ, ಸರ್.

-ಡಾ. ಲಕ್ಷ್ಮಣ ವಿ ಎ, ಸಾಹಿತಿ ಮತ್ತು ವೈದ್ಯರು, ಬೆಂಗಳೂರು
